ತರುಣ ಕರ್ನಾಟಕ -
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಿಂದ, ಎಲ್.ಎಸ್.ಪಾಟೀಲರ ಸಂಪಾದಕತ್ವದಲ್ಲಿ, ಪ್ರಕಟವಾಗುತ್ತಿದ್ದ ದಿನಪತ್ರಿಕೆ, ಗ್ರಾಮಾಂತರ ಪ್ರದೇಶದ ಸುದ್ದಿಗಳಿಗಾಗಿ, ಅಧಿಕಾರಿಗಳ ಟೀಕೆಗಾಗಿ ಜನರನ್ನು ಜಾಗೃತಗೊಳಿಸುವ ಸ್ಪುಟ ಲೇಖನಗಳಿಗಾಗಿ ಒಳ್ಳೆಯ ಹೆಸರು ಪಡೆದಿತ್ತು. ಆಧುನಿಕ ಸೌಕರ್ಯಗಳೆನಿಸಿದ ಟೆಲಿಪ್ರಿಂಟರ್, ದೊಡ್ಡ ಮುದ್ರಣಯಂತ್ರ ಮುಂತಾದವನ್ನು ಇದು ಹೊಂದಿರಲಿಲ್ಲ. ಆದರೂ ಇದು ವೈಶಿಷ್ಟ್ಯಪೂರ್ಣವಾದ ಪತ್ರಿಕೆಯಾಗಿತ್ತು. ದೂರದ ಪ್ರದೇಶಗಳಿಗೆ, ಹಳ್ಳಿಗಳಿಗೆ ಅಭಿಕರ್ತರ (ಏಜಂಟ್) ಮೂಲಕ ಸರಿಯಾದ ಸಮಯಕ್ಕೆ ಅದರ ಹಂಚಿಕೆಯಾಗುತ್ತಿತ್ತು. ಸಾಮಾನ್ಯ ಜನರ ಹಿತರಕ್ಷಣೆ, ಅವರ ಅವಶ್ಯಕತೆಗಳನ್ನು ಅಧಿಕಾರಿಗಳು ಗಮನಿಸುವಂತೆ ಮಾಡುವುದು, ಅವರಿಗೆ ಸೌಕರ್ಯಗಳು ದೊರೆಯುವಂತೆ ಮಾಡುವುದು-ಇವು ಪತ್ರಿಕೆಯ ಉದ್ದೇಶಗಳು.
1933ರಲ್ಲಿ ಆರಂಭವಾದ ಈ ಪತ್ರಿಕೆ ಸುಮಾರು ಎರಡು ದಶಕಗಳ ಕಾಲ ನಡೆಯಿತು. ಇದರಲ್ಲಿ ಪ್ರಕಟವಾಗುತ್ತಿದ್ದ 'ಧಡಲ್‍ಬಾಜ' ಶೀರ್ಷಿಕೆ ಅದರ ವಿಶಿಷ್ಟ ದೇಣಿಗೆಯಾಗಿತ್ತು. ಅಲ್ಲಿ ಸುದ್ದಿ ಸಂಗತಿಗಳನ್ನು ಆಧರಿಸಿದ ಟೀಕೆ ಟಿಪ್ಪಣಿಗಳು ಬರುತ್ತಿದ್ದವು. ಅಧಿಕಾರಿಗಳ ಕುಕೃತ್ಯಗಳನ್ನು ಈ ಶೀರ್ಷಿಕೆಯ ಮೂಲಕ ಬಯಲಿಗೆ ತರಲಾಗುತ್ತಿತ್ತು. ಡೆಮಿ ಅರ್ಧ ಆಕಾರದ ನಾಲ್ಕು ಪುಟಗಳಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಪ್ರಾರಂಭದಲ್ಲಿ 6 ಕಾಸು ಇದ್ದದ್ದು ಕೊನೆಯಲ್ಲಿ ಒಂದು ಆಣೆಗೆ (6 ಪೈಸೆ) ಏರಿತ್ತು. ಇದರ ಪ್ರಸಾರ 5,000 ದಿಂದ 10,000ದವರೆಗೂ ಇತ್ತು.
(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ